ಪ್ಲಿನಿ
23-79. ರೋಮನ್ ವಿದ್ವಾಂಸ. ಪ್ಲಿನಿಯಸ್ ಸಿಕಂಡಸ್ ಎಂಬುದು ಈತನ ಲ್ಯಾಟಿನ್ ಹೆಸರು. ಹಿರಿಯ ಪ್ಲಿನಿ ಎಂದು ಪ್ರಸಿದ್ಧನಾಗಿದ್ದಾನೆ. ಇಟಲಿಯ ಕೋಮೊ (ಕೋಮಮ್) ಎಂಬಲ್ಲಿ 23ರಲ್ಲಿ ಜನಿಸಿದ. ವಿಸೂವಿಯಸ್ ಅಗ್ನಿಪರ್ವತದ ಸ್ಫೋಟವನ್ನು ಹತ್ತಿರದಿಂದ ವೀಕ್ಷಿಸಲು ಯತ್ನಿಸಿ 79ರಲ್ಲಿ ಕಾಲವಾದ. ರೋಮಿನಲ್ಲಿ ಉತ್ತಮ ಗುರುಗಳಿಂದ ವಿದ್ಯೆ ಕಲಿತು ಜರ್ಮನಿಯಲ್ಲೂ ಆಫ್ರಿಕದಲ್ಲೂ ಸೈನಿಕನಾಗಿ ಸೇವೆ ಸಲ್ಲಿಸಿದ. ಸ್ಪೇನಿನಲ್ಲಿ ನಿಯೋಗಿಯಾಗಿ ಕೆಲಸ ಮಾಡಿದ. ಸೈನಿಕನ ಕರ್ತವ್ಯಗಳ ನಡುವೆ ವೇಳೆ ಮಾಡಿಕೊಂಡು ಜರ್ಮನಿಕ್ ಯುದ್ಧದ ಇತಿಹಾಸವನ್ನು ಪ್ರಾರಂಭಿಸಿ 29 ಸಂಪುಟಗಳನ್ನು ಮುಗಿಸಿದ. ಇತಿಹಾಸ, ಅಲಂಕಾರಶಾಸ್ತ್ರ, ಪ್ರಾಕೃತಿಕವಿಜ್ಞಾನ, ಯುದ್ಧವಿಜ್ಞಾನ ಮುಂತಾದ ನಾನಾ ಕ್ಷೇತ್ರಗಳಲ್ಲಿ ಇವನು ಗ್ರಂಥಗಳನ್ನು ರಚಿಸಿದ. ಇವನು ಅಭ್ಯಾಸಮಾಡಿದ ಪುಸ್ತಕಗಳಿಂದೆಲ್ಲ ಟಿಪ್ಪಣಿ ಬರೆದಿಟ್ಟುಕೊಂಡ. ಇಂಥ ಟಿಪ್ಪಣಿಗಳ ಆಧಾರದ ಮೇಲೆ ಪ್ರಾಕೃತಿಕ ಇತಿಹಾಸವನ್ನು (ಹಿಸ್ಟೋರಿಯ ನ್ಯಾಚುರಾಲಿಸೆ) ಬರೆದು ಪ್ರಕಟಿಸಿದ. ಇದೊಂದೇ ಇಂದು ಲಭ್ಯವಿರುವ ಇವನ ಗ್ರಂಥ. ಇದರಲ್ಲಿ 37 ಪುಸ್ತಕಗಳು (ವಿಭಾಗಗಳು) ಇವೆ. ಸುಮಾರು 2,000 ಗ್ರಂಥಗಳಿಂದ ವಿಷಯ ಸಂಗ್ರಹಿಸಿ ಇದನ್ನು ಬರೆದದ್ದಾಗಿ ಪ್ಲಿನಿ ಹೇಳಿಕೊಂಡಿದ್ದಾನೆ. ಪ್ರಕೃತಿ ವಿಜ್ಞಾನದ ವಿಶ್ವಕೋಶ ಸದೃಶಗೃಂಥವಿದು. ಪ್ರಕೃತಿಯ ವ್ಯಾಪಕಾರ್ಥವನ್ನು ಗಮನಿಸಿ, ಅದರ ಕಕ್ಷೆಯಲ್ಲಿ ಬರುವ ಅನೇಕ ವಿಷಯಗಳನ್ನು ಅನುಲಕ್ಷಿಸಿ, ಈ ಗ್ರಂಥವನ್ನು ಬರೆದಿದ್ದಾನೆ. 1609ರಲ್ಲಿ ಇದರ ಮೊದಲನೆಯ ಆವೃತ್ತಿ ಪ್ರಕಟವಾಯಿತು. ಇತಿಹಾಸ ಸಂಶೋಧಕರಿಗೆ ಇದು ಒಂದು ಆಕರವಾಗಿದೆ. ಇದರಲ್ಲಿ ಕ್ರಿಸ್ತಶಕ 1ನೆಯ ಶತಮಾನದ ಜೀವನವನ್ನು ಅರಿಯಬಹುದು. ಈ ಗ್ರಂಥದ 6ನೆಯ ಪುಸ್ತಕದಲ್ಲಿ ಶ್ರೀಲಂಕಾ ಮತ್ತು ಭಾರತದ ಬಗ್ಗೆ ವಿವರಗಳಿವೆ. ಭಾರತ ಮತ್ತು ರೋಮ್‍ಗಳ ನಡುವೆ ಸಾಗುತ್ತಿದ್ದ ವ್ಯಾಪಾರದ ಕಾರಣ, ರೋಮ್ ಜನರ ಹಣಕಾಸು ಪರಿಸ್ಥಿತಿ, ಭಾರತದ ಮುತ್ತು, ಹವಳ, ರೇಷ್ಮೆ, ವಜ್ರ, ವೈಡೂರ್ಯಗಳ ಬಗ್ಗೆ ರೋಮನ್ ಸ್ತ್ರೀಯರಿಗೆ ಇದ್ದ ವ್ಯಾಮೋಹ ಮುಂತಾದವೆಲ್ಲವುಗಳ ವರ್ಣನೆಯನ್ನು ಇಲ್ಲಿ ಕಾಣಬಹುದು.

	ಹಿರಿಯ ಪ್ಲಿನಿಯ ಸೋದರಳಿಯ ಪ್ಲಿನಿಯಸ್ ಸಿಸಿಲಿಯಸ್ ಸೆಕಂಡಸ್ (62-113) ಕಿರಿಯ ಪ್ಲಿನಿಯೆಂದು ಹೆಸರಾಗಿದ್ದಾನೆ. ಇವನ ಪತ್ರಗಳು ಪ್ರಸಿದ್ಧವಾಗಿವೆ. ಬಿತಿನಿಯ ಮತ್ತು ಪಾಂಟಿಕಗಳಲ್ಲಿ ಕ್ರೈಸ್ತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕುರಿತು ಚಕ್ರವರ್ತಿ ಟ್ರಾಜನನಿಗೆ ಬರೆದ ಪತ್ರವೂ ಇವುಗಳಲ್ಲಿ ಸೇರಿದೆ. ಕ್ರೈಸ್ತಮತವನ್ನು ಕುರಿತ ಅತ್ಯಂತ ಪ್ರಾಚೀನ ಉಲ್ಲೇಖಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.											(ಜಿ.ಆರ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ